ಧಮ್ಮಪದ
	ತ್ರಿಪಿಟಕಗಳಲ್ಲೊಂದಾದ ಸುತ್ತಪಿಟಕದಲ್ಲಿನ ಬುದ್ಧಕ ನಿಕಾಯಕ್ಕೆ ಸೇರಿದ ಭಾಗ. ಬುದ್ಧ ತೋರಿಸಿದ ಧರ್ಮದ ಮಾರ್ಗವನ್ನು 423 ಪದ್ಯಗಳಿದ್ದು ಸ್ಫುಟಪಡಿಸುತ್ತದೆ.     

	ಧಮ್ಮಪದ ಬೌದ್ಧಸಾಹಿತ್ಯದಲ್ಲಿ ಅತಿ ಪ್ರಸಿದ್ಧವಾದ ಗ್ರಂಥ.  ದೇಶವಿದೇಶದ ವಿದ್ವಾಂಸರು ಇದನ್ನು ಕುರಿತು ಬಹಳ ಬರೆದಿದ್ದಾರೆ.  ಯೂರೋಪಿನ ಬಹು ಭಾಷೆಗಳಲ್ಲಿದು ಅನುವಾದಗೊಂಡಿದೆ.  ಕನ್ನಡದಲ್ಲೂ ಇದು ಅವತರಿಸಿದೆ.  

	ಇದರಲ್ಲಿ 26 ಅಧ್ಯಾಯಗಳಿವೆ. ಅವುಗಳಲ್ಲಿ ಪ್ರತಿಯೊಂದು ನಿರ್ದಿಷ್ಟವಾದ ಒಂದು ವಿಷಯವನ್ನು ಮಂಡಿಸುತ್ತದೆ.  

	ಧಮ್ಮಪದದ ಪ್ರತಿಯೊಂದು ಸೂಕ್ತಿಯನ್ನು ಅದರ ಐತಿಹಾಸಿಕ ಹಿನ್ನೆಲೆಯ ಜೊತೆಜೊತೆಗೆ ಅರ್ಥ ಮಾಡಿಕೊಳ್ಳಬೇಕಾದುದು ಅತ್ಯಗತ್ಯ.  ಈ ಹಿನ್ನೆಲೆಯ  ಕಥೆಗಳು ಐತಿಹಾಸಿಕ ದೃಷ್ಟಿಯಿಂದ  ಮಾತ್ರವಲ್ಲದೆ, ಆಗಿನ ಸಾಮಾಜಿಕ ರಾಜಕೀಯ ಆರ್ಥಿಕ ನೈತಿಕ ಹಾಗೂ ಧಾರ್ಮಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಿಂದಲೂ ಶ್ರೀಮಂತವಾಗಿವೆ;  ಅಷ್ಟೇ ಅಲ್ಲದೆ ವೈದ್ಯ, ಶಿಲ್ಪ, ತಾಂತ್ರಿಕ ಜ್ಞಾನ ಇತ್ಯಾದಿ ವಿಷಯಗಳ ಬಗ್ಗೆಯೂ ವಿಪುಲ ವಿವರಗಳು ದೊರೆಯುತ್ತವೆ.

	ಧಮ್ಮಪದದ ಸಾರ ಇಷ್ಟು: ಮಾನವಜನ್ಮವನ್ನು ಗಳಿಸುವುದು ಕಷ್ಟಕರ.  ಆದ್ದರಿಂದ ಪ್ರತಿಯೊಬ್ಬನೂ ಈ ಸುಯೋಗದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅದನ್ನು ಆಧ್ಯಾತ್ಮಿಕ ಪರಿಪೂರ್ಣತೆಗೆ ಸಾಧನವಾಗಿ ರೂಪಿಸಿಕೊಳ್ಳಬೇಕು.  

	ಮಾನವ ಜನ್ಮದ ಸುಯೋಗದ ಪೂರ್ಣ ಪ್ರಯೋಜನವನ್ನು ಪಡೆಯಲು ಶಕ್ತರಾದ ಮಂದಿ ವಿವೇಕಿಗಳು; ಅವರು ಆಧ್ಯಾತ್ಮಿಕವಾಗಿ ವರ್ಧಿಸುತ್ತಾರೆ ಮಾತ್ರವಲ್ಲ, ಸುಖವನ್ನೂ ಅನುಭವಿಸುತ್ತಾರೆ.

	ಆದ್ದರಿಂದ ಈ ಉತ್ತಮ ಜೀವನಕ್ಕಾಗಿ ಅನ್ವಯಿಕ ಮಾರ್ಗದರ್ಶಿ ಉದ್ದೇಶ ಎಂದರೆ ಸ್ವಯಂನಿಷ್ಠ ಜೀವನರೀತಿಗೆ ತಿರುಗಿಸಬಹುದಾದ ಅರ್ಥಪೂರ್ಣ ತಾತ್ತ್ವಿಕತೆಯೇ ಆಗಿದೆ.  ಇದೇ ಪ್ರಕಾರ ಯಾವುದೇ ವ್ಯಕ್ತಿಯ ಜೀವನವನ್ನು ವ್ಯವಸ್ಥಿತಗೊಳಿಸಿಕೊಳ್ಳಲು ಧಮ್ಮಪದ ಕೆಲವು ಆದ್ಯತೆಗಳನ್ನು ಮುಂದಿಡುತ್ತದೆ.  ಜೀವನದಲ್ಲಿನ ಆದ್ಯತೆಗಳಿಗೆ ಹೋಗುವ ಮೊದಲು, ಅಗತ್ಯ ಮತ್ತು ಅನಗತ್ಯಗಳ  ನಡುವಣ, ಸತ್ಯ ಹಾಗೂ ಮಿಥ್ಯೆಗಳ ನಡುವಣ ಭೇದಗಳನ್ನು ಗುರುತಿಸಬೇಕು; ಅಗತ್ಯತೆ ಋಜುತ್ವಗಳನ್ನು ನೆಮ್ಮಿಕೊಂಡು ವಾಸ್ತವತೆಗಳಿಗನುಗುಣವಾದ ಸತ್ಯ ಜೀವನವನ್ನು ವ್ಯವಸ್ಥಿತಗೊಳಿಸಿಕೊಳ್ಳಬೇಕು.  ಆದ್ದರಿಂದ ಧಮ್ಮಪದ ಘೋಷಿಸುವುದೇನೆಂದರೆ ಃ 
			ಅಸಾರೇ ಸಾರಮತಿನೋ
			ಸಾರೇ ಚಾಸಾರವಸ್ಸಿನೋ
			ತೇ ಸಾರಂ ನಾಧಿಗಚ್ಛಂತಿ
			ಮಿಚ್ಛಾ ಸಂಕಪ್ಪ ಗೋಚರಾ 
                            ಸಾರವಲ್ಲದ್ದನ್ನು ಸಾರವೆಂತಲೂ 
	                         ಸಾರವಾದದ್ದನ್ನು ಸಾರವಲ್ಲದ್ದೆಂದೂ
                            ತಿಳಿಯುವವರು ಸಾರದ ನೆಲೆಯನ್ನು ಮುಟ್ಟಲಾರರು.
                            ಏಕೆನೆ, ಅವರು ಮಿಥ್ಯೆಯ ನಾಡಿಯಲ್ಲಿ ಅಲೆಯುತ್ತಿರುತ್ತಾರೆ.   
              ಸಾರಂ ಚ ಸಾರತೋ ನತ್ವಾ
              ಅಸಾರಂ ಚ ಅಸಾರತೋ 
              ತೇ ಸಾರಂ ಅಧಿಗಚ್ಛಂತಿ
              ಸಮ್ಮಾ ಸಂಕಪ್ಪ ಗೋಚರಾ 
                             ಸಾರವಾದದ್ದನ್ನು ಸಾರವೆಂತಲೂ 
                             ಸಾರವಲ್ಲದ್ದನ್ನು ಸಾರವಲ್ಲವೆಂತಲೂ
                             ತಿಳಿಯುವವರು ಸಾರದ ನೆಲೆಯನ್ನು ಮುಟ್ಟುತ್ತಾರೆ. 
                             ಏಕೆನೆ, ಅವರು ಸತ್ಯದ ನಾಡಿನಲ್ಲಿ ವಾಸಿಸುತ್ತಾರೆ.          

	ತಪ್ಪು ಆದ್ಯತೆ ಅಥವಾ ನಂಬಿಕೆ ಆಂತರಿಕ ಕೊರತೆಯನ್ನು ಸಂಕೇತಿಸುತ್ತದೆ. ಇದರ ಬೇರು ತಪ್ಪಾಗಿ ಕಲಿತ ಆದರ್ಶಗಳಲ್ಲಿ, ಭಯಗಳಲ್ಲಿ ತಳವೂರಿರುತ್ತದೆ. ಇದು ವ್ಯಕ್ತಿಯನ್ನು ತಪ್ಪುಗುರಿಗಳಿಗೆ, ಸುರಕ್ಷಿತ ಆಶ್ರಯವಲ್ಲದ ಗುರಿಗಳಿಗೆ ಒಯ್ಯುತ್ತದೆ.  ಅನಿರ್ದಿಷ್ಟತೆ ಹಾಗೂ ಬಂಧನಗಳ ಈ ಅಪಾಯಕಾರಿ ಜಗತ್ತಿನಲ್ಲಿ ಜ್ಞಾನಪಡೆದವ ಮಾತ್ರ, ಸಂತರ ಸಂಘ ಹಾಗೂ ಸತ್ಯಗಳು ಮಾತ್ರ ರಕ್ಷಣೆಯ ಭರವಸೆ ಕೊಡಬಲ್ಲವು.  ಜ್ಞಾನಿಯ ಆಶ್ರಯ ಪಡೆಯುವುದೆಂದರೆ ಜ್ಞಾನದ ಆಶ್ರಯ ಪಡೆದಂತೆಯೇ.  ಸತ್ಯವನ್ನು ಅರಸುವುದೆಂದರೆ ಸತ್ಯಸಂಪನ್ನನಾದಂತೆಯೇ.  ಜಗತ್ತಿನ ದ್ವಂದ್ವಗಳಿಗೆ ಅತೀತವಾಗಲು ಸಹಾಯಕವಾಗುವ ಪಥವನ್ನು ತುಳಿಯಲು ಹಂಬಲಿಸುವುದೆಂದರೆ ಅತೀಂದ್ರಿಯ ಪಥಕ್ಕೆ ಮಾರ್ಗ ಪಡೆಯುವ ಸುಯೋಗ ಹೊಂದಿದಂತೆಯೇ.  ವಿಶ್ಲೇಷಣೆಯ ಕೊನೆಯ ಹಂತದಲ್ಲಿ ನೋಡಿದಾಗ ಬದುಕು ಅಸಂಪೂರ್ಣ ಅತೃಪ್ತಿಕರ.  ಧಮ್ಮಪದದ ಭಾಷೆಯಲ್ಲಿ ಹೇಳುವುದಾದರೆ ದುಃಖ.  ಆದ್ದರಿಂದ  ಜೀವನದ ಏಕೈಕ ಅರ್ಥಪೂರ್ಣ ಧ್ಯೇಯ ಎಂದರೆ ಅಪರಿಪೂರ್ಣತೆ ಹಾಗೂ ಅತೃಪ್ತಿಗಳನ್ನು ಮೀರುವಿಕೆ  ನೋವಿನ ಜಗತ್ತಿನಿಂದ ಬಿಡುಗಡೆಯಾಗುವಿಕೆ.  ಆದ್ದರಿಂದ ಧಮ್ಮಪದದ ಸೂತ್ರ ಹೀಗನ್ನುತ್ತದೆ :   

	             ಬಹುಂ ವೆ ಸರಣಂ ಯಂತಿ
                ಪಬ್ಬತಾನಿ ವನಾನಿ ಚ 
                ಆರಾಮ ರುಕ್ಖ ಚೇತ್ಯಾನಿ 
		              ಮನುಸ್ಸಾ ಭಯತಜ್ಜಿತಾ
                           ಭಯದಿಂದ ಗ್ರಸ್ತರಾದ ಜನರು 
                        ಪರ್ವತ, ಕಾಡು, ತೋಪು,
                        ವೃಕ್ಷ, ದೇಗುಲಗಳು ಮೊದಲಾದವುಗಳಿಗೆ 
                        ಧಾವಿಸಿ ಶರಣು ಹೋಗುತ್ತಾರೆ. 
                                  ನೇತಂ ಖೊ ಸರಣಂ ಖೇಮಂ
                                  ನೇತಂ ಸರಣಮುತ್ತಮಂ
                                  ನೇತಂ ಸರಣಮಾಗಮ್ಮ
                                  ಸಬ್ಬ ದುಕ್ಖಾ ಪಮುಚ್ಚತಿ 
ಯಾವ ಆಶ್ರಯ ಉನ್ನತ ಆಶ್ರಯವಲ್ಲವೊ
ಅದು ಖಂಡಿತವಾಗಿ ಕ್ಷೇಮಕಾರಕ ಆಶ್ರಯವಲ್ಲ. 
ಇಂಥ ಆಶ್ರಯವನ್ನು ಅವಲಂಬಿಸುವುದರಿಂದ
ಸರ್ವ ದುಃಖಗಳಿಂದ ಬಿಡುಗಡೆ ಸಾಧ್ಯವಿಲ್ಲ.    
ಯೋ ಚ ಬುದ್ಧಂ ಚ ಧಮ್ಮಂ ಚ
ಸಂಘಂ ಚ ಸರಣಂ ಗತೋ
ಚತ್ತಾರಿ ಅರಿಯಸಚ್ಚಾನಿ
ಸಮ್ಮಪ್ಪ ಇÁ್ಞ ಯ ಪಸ್ಸತಿ
ಯಾರು ಬುದ್ಧ ಮತ್ತು ಧರ್ಮ
ಮತ್ತು ಸಂಘಗಳಿಗೆ ಶರಣು ಹೋಗುತ್ತಾರೆಯೋ
ಅವರು ನಿಜವಾದ ಅಂತರ್ಬೋಧೆಯಿಂದ
ನಾಲ್ಕು ಉದಾತ್ತ ಸತ್ಯಗಳ ಸಾಕ್ಷಾತ್ಕಾರ ಪಡೆವರು. 
ದುಕ್ಖಂ ದುಕ್ಖ ಸಮುಪ್ಪಾದಂ 
ದುಕ್ಕಸ್ಸ ಚ ಅತಿಕ್ಕಮಂ
ಅರಿಯಂ ಚಟ್ಠಂಗಿಕಂ ಮಗ್ಗಂ
ದುಕ್ಖೂಪಸಪಗಾಮಿನಂ 
ದುಃಖ ದುಃಖ ಹೇತು, ದುಃಖ ನಿರೋಧ
ಮತ್ತು ದುಃಖವನ್ನು ಉಪಶಮನಗೊಳಿಸುವ
ಆರ್ಯ ಅಷ್ಟಾಂಗಿಕ ಮಾರ್ಗಗಳು - ಇವೇ 
ಆ ನಾಲ್ಕು ಸತ್ಯಗಳು.  
ಏತಂ ಖೊ ಸರಣಂ ಖೇಮಂ
ಏತಂ ಸರಣ ಮುತ್ತಮಂ
ಏತಂ ಸರಣಮಾಗಮ್ಮ
ಸಬ್ಬದುಕ್ಖಾ ಪಮುಚ್ಚತಿ  
ಇದೇ ಖಂಡಿತವಾಗಿ, ಕ್ಷೇಮದಾಯಕ ಆಶ್ರಯ. 
ಇದೇ ಉತ್ತಮೋತ್ತಮ ಆಶ್ರಯ.
ಇದಕ್ಕೆ ಶರಣು ಹೋಗುವವರು 
ಸರ್ವ ದುಃಖಗಳಿಂದ ಮುಕ್ತರಾಗುವವರು. 
   
 ಎಲ್ಲ ಆಧ್ಯಾತ್ಮಿಕ ಸಾಧನೆಗಳ ತಳಪಾಯ ಎಂದರೆ ಸ್ವಪ್ರಯತ್ನ. ಜಗತ್ತಿನ ಬಂಧನಗಳಿಂದ ಮುಕ್ತರಾಗಲು ಸತತ ಪ್ರಯತ್ನ ನಡೆಸಲೇಬೇಕು.  ಇಂಥ ಪ್ರಯತ್ನ ಎಂದರೆ ಇಂದ್ರಿಯಸುಖಗಳ ತ್ಯಾಗ ಎಂದೇ ಅರ್ಥ.   ಹಾಗಾದಾಗ ಅಧ್ಯಾತ್ಮಸುಖ ದೊರೆಯಬಹುದು.     

	ಜೀವನವನ್ನು ವ್ಯವಸ್ಥೆಗೊಳಿಸಿಕೊಳ್ಳಲು ನಿಶ್ಚಿತವಾದ ಆಧ್ಯಾತ್ಮಿಕ ವಿಧಾನಗಳನ್ನು ಧಮ್ಮಪದದಲ್ಲಿ - ಶೀಲ, ಸಮಾಧಿ ಮತ್ತು ಪಇÁ್ಞ ಎಂಬ ಮೂರು ಪರಿಗಡಗಳಡಿಯಲ್ಲಿ ಅಡಕವಾಗಿ ವಿವರಿಸಲಾಗಿದೆ - ಈ ರೀತಿಯಾಗಿ:

ಸಬ್ಬಪಾಪಸ್ಸ ಅಕರಣಂ
ಕುಸಲಸ್ಸ ಲುಪಸಂಪದಾ
ಸಚಿತ್ತ ಪರಿಯೋದಪನಂ
ಏತಂ ಬುದ್ಧಾನ ಸಾಸನಂ
ಸರ್ಮಪಾಪಗಳನ್ನು ಬಿಡಬೇಕು,
ಒಳಿತನ್ನು ಬೆಳೆಸಿಕೊಳ್ಳಬೇಕು,
ಚಿತ್ತವನ್ನು ಶುದ್ಧಿಗೊಳಿಸಿಕೊಳ್ಳಬೇಕು,
ಇದೇ ಬುದ್ಧನ ಬೋಧನೆ.       

	ನೈತಿಕತೆಯ ತಿರುಳು ನಿಗ್ರಹ. ಕ್ರಿಯೆಯ ಚಾಲಕಶಕ್ತಿಯ ಅಂತರ್ಬೋಧೆಯ ಮೇಲೆ ನಿಗ್ರಹ ಆಧರಿತವಾಗಿದೆ.  ಬೌದ್ಧ ನೀತಿಶಾಸ್ತ್ರ ಸಂಕಲ್ಪಕ್ರಿಯೆಯ ಮೇಲೆ ಆಧರಿತವಾಗಿದೆ.  ಒಳಿತು ಹಾಗೂ ಕೆಡುಕಿನ ಮಾನದಂಡವನ್ನು ನಿರ್ಧರಿಸುವುದು- ಹೇತಸ್-ಪ್ರೇರಣೆಗಳು.  ವಾಸ್ತವವಾಗಿ ಬೌದ್ಧಜೀವನ ಎಂದರೆ ಕ್ರಿಯಾಶೀಲ ಜೀವನ - ಹಿತಕರವಾದ, ಸಂಕಲ್ಪಪೂರ್ಣಕ್ರಿಯೆಯ ಜೀವನ.  ಏಕೆಂದರೆ, ಜೀವನದ ಅಸ್ತಿಭಾರವಾದ ಶೀಲ ಪ್ರಬಲವಾಗಿ ಸ್ಥಿರವಾಗಿ ಇದ್ದಾಗ ಮಾತ್ರ ಸಮಾಧಿ ಎಂಬ ಮೇಲುಕಟ್ಟಡವನ್ನು ಕಟ್ಟಲು ಸಾಧ್ಯ; ಪಇÁ್ಞ ಎಂಬ ಕಳಶವನ್ನು ಸ್ಥಾಪಿಸಲು ಸಾಧ್ಯ.    
    
ನೇತಂ ಕಮ್ಮಂ ಕತಂ ಸಾಧು
ಯಂ ಕತ್ಪಾ ಅನುತಪ್ಪತಿ
ಯಸ್ಸ ಅಸ್ಸು ಮುಖೋ ರೋದಂ
ವಿಷಾಕಂ ಪಟಿಸೇವತಿ 
ಯಾವ ಕರ್ಮವನ್ನು ಮಾಡಿ ಮನುಷ್ಯ
ಅನುತಾಪ ಪಡುತ್ತಾನೋ ಯಾವುದರ 
ಫಲವನ್ನು ಕಣ್ಣೀರು ಸುರಿಸುತ್ತ
ಅನುಭವಿಸುತ್ತಾನೋ ಆ ಕಷ್ಟ ತಕ್ಕುದಲ್ಲ. 
ಅತ್ತನಾ ವ ಕತಂ ಪಾಪಂ
ಅತ್ತನಾ ಸಂಕಿಲಿಸ್ಸತಿ
ಅತ್ತನಾ ಅಕತಂ ಪಾಪಂ
ಅತ್ತನಾ ವ ವಿಸುಜ್ಝತಿ 
ಸುದ್ಧಿ ಅಸುದ್ಧಿ ಪಚ್ಚತ್ತಂ
ನಾ ಇÉ್ಞೂ ಅಂ ವಿಸೋಧಯೇ   
 
ಪಾಪವನ್ನು ಮಾಡುವುದರಿಂದ ವ್ಯಕ್ತಿ
ತನ್ನನ್ನು ತಾನೇ ಕೆಡಿಸಿಕೊಳ್ಳುತ್ತಾನೆ;
ಪಾಪವನ್ನು ಮಾಡದಿರುವುದರಿಂದ ವ್ಯಕ್ತಿ
ತನ್ನನ್ನು ತಾನೇ ಶುದ್ಧಿ ಮಾಡಿಕೊಳ್ಳುತ್ತಾನೆ;
ಶುದ್ಧಿ ಅಶುದ್ಧಿಗಳ ವ್ಯಕ್ತಿಯನ್ನೇ ಅವಲಂಬಿಸಿವೆ. 
ಒಬ್ಬ ಇನ್ನೊಬ್ಬನನ್ನು ಶುದ್ಧಿಗೊಳಿಸಲಾರ.   

ಯೋ ಪಾಣಂ ಅತಿಪಾತೇತಿ 
ಮುಸಾವಾದಂ ಚ ಭಾಸತಿ
ಲೋಕೇ ಅದಿನ್ನಂ ಆದಿಯತಿ
ಪರಾದರಂ ಚ ಗಚ್ಛತಿ
ಸುರಾಮೇರಯಾ ಪಾನಂ ಚ 
ಯೋ ನರೋ ಅನುಯಂಜತಿ
ಇಧೇವ ಮೇಸೋ ಲೋಕಸ್ಮಿಂ
ಮೂಲಂ ಖಣತಿ ಅತ್ತನೋ      
 
ಈ ಲೋಕದಲ್ಲಿ ಜೀವನಾಶ ಮಾಡುವವನು,
ಸುಳ್ಳನ್ನು ಆಡುವವನು ತನ್ನದಲ್ಲದನ್ನು 
ತೆಗೆದುಕೊಳ್ಳುವವನು, ಇನ್ನೊಬ್ಬನ ಹೆಂಡತಿ
ಯೊಂದಿಗೆ ಸರಸವಾಡುವವನು ಮತ್ತೇರಿಸುವ 
ಮದ್ಯಪಾನ ಮಾಡುವವನು ಯಾವನೇ
ಆಗಿರಲಿ ಇದೇ ಲೋಕದಲ್ಲಿಯೇ
ತನ್ನ ಗೋರಿಯನ್ನು ತಾನೇ ತೋಡಿ
ಕೊಳ್ಳುವನು.       
ಅನುಪುಬ್ಬೇನ ಮೇಧಾವಿ 
ಥೋಕ ಥೋಕಂ ಖಣೇ ಖಣೇ
ಕಮ್ಮಾರೋ ರಜತಸ್ಸೇವ
ನಿದ್ಧಮೇ ಮಲಮತ್ತನೋ     
ಅಕ್ಕಸಾಲೆ ಬೆಳ್ಳಿಯ ಮೇಲಿನ ಕೊಳೆಯನ್ನು 
ಸ್ವಲ್ಪ ಸ್ವಲ್ಪವೇ ತೆಗೆಯುವಂತೆ ವಿವೇಕಿಯಾದವನು
ತನ್ನ ದೋಷಗಳನ್ನು ಒಂದೊಂದಾಗಿ ಸ್ವಲ್ಪ
ಸ್ವಲ್ಪವಾಗಿ ಕಾಲಕಾಲಕ್ಕೆ ತೆಗೆದು ಇಲ್ಲವಾಗಿಸಬೇಕು.      

	ಧ್ಯಾನದಿಂದಾದ ಬುದ್ಧಿಯ ಸಂಸ್ಕಾರವನ್ನು ಸೊಗಸಾಗಿ ನಿರೂಪಿಸಲಾಗಿದೆ.  ಧ್ಯಾನ ಎಂದರೆ (ಯಾವುದೇ ವ್ಯಕ್ತಿ ತನ್ನ ಸ್ವಾರಸ್ಯಕ್ಕೆಂದು ಬೆಳೆಸಿಕೊಳ್ಳುವ) ಕೇವಲ ಚಾತುರ್ಯವಲ್ಲ, ಮೇಧಾಶಕ್ತಿಯಲ್ಲ, ಹವ್ಯಾಸವಲ್ಲ; ವ್ಯಕ್ತಿಯ ಆಂತರಿಕ ಬೆಳೆವಣಿಗೆ ವ್ಯಕ್ತಿಯ ಒಳಗೇ ಅಡಗಿರುವ ಆಧ್ಯಾತ್ಮಿಕ ಶಕ್ತಿಯ ಅರಳುವಿಕೆಗೆ ಅತ್ಯಗತ್ಯವಾಗಿ, ಅನಿವಾರ್ಯವಾಗಿ ಬೇಕೇ ಆದ ಅಂಶ.  ಈ ಸೂತ್ರಗಳು ಹೇಳುವುದೂ ಅದನ್ನೇ:              
ಯೋಗಾ ವೇ ಜಾಯತೀ ಭೂರೀ
ಅಯೋಗಾ ಭೂರಿಸಂಖಯೋ
ಏತಂ ದ್ವೇದಾಪಥಂ ಇÁತ್ಪಾ 
ಭವಾಯ ವಿಭವಾಯ ಚ
ತಥತ್ತಾನಂ ನಿವೇಸೆಯ್ಯಾ
ಯಥಾ ಭೂರಿ ಪವಡ್ಢತಿ     
ಜ್ಞಾನ ಧ್ಯಾನದಿಂದ ಹುಟ್ಟುತ್ತದೆ. 
ಧ್ಯಾನವಿಲ್ಲದಿದ್ದರೆ ಜ್ಞಾನ ಕ್ಷಯಿಸುತ್ತದೆ. 
ವೃದ್ಧಿ ಮತ್ತು ಕ್ಷಯದ ಈ ಎರಡು
ಮಾರ್ಗಗಳನ್ನು ಅರಿತು ಮಾನವ 
ಜ್ಞಾನ ವೃದ್ಧಿ ಹೊಂದುವ ಮಾರ್ಗವನ್ನು
ಬಿಡದೆ ಅನುಸರಿಸಲಿ.   
ಯೋಚ ವಸ್ಸಸತಂ ಜೀವೇ
ದುಸ್ಸೀಲೊ ಅಸಮಾಹಿತೋ
ಏಕಾಹಂ ಜೀವಿತಂ ಸೆಯ್ಯೋ
ಸೀಲವಂತಸ್ಸ ಝಾಯಿನೋ   
ನೀತಿಹೀನನಾಗಿ ಸಂಯಮಹೀನನಾಗಿ
ನೂರು ವರ್ಷ ಬಾಳುವುದಕ್ಕಿಂತ
                   ಶೀಲವಂತನಾಗಿ ಧ್ಯಾನಿಯಾಗಿ
ಒಂದು ದಿನ ಬದುಕುವುದು ಮೇಲು.  
ಯೇ ಝಾನ ಪಸುತಾ ಧೀರಾ
ನೆಕ್ಖಮ್ಮೂಪಸಮೇ ರತಾ
ದೇವಾಪಿ ತೇಸಂ ಪಿಹಯಂತಿ
ಸಂಬುದ್ಧಾನಂ ಸತೀಮತಂ     
ಧ್ಯಾನದಲ್ಲಿ ನಿರತರಾಗಿರುವ, ನಿಬ್ಬಾಣದ
ಶಾಂತಿಯಲ್ಲಿ ಆನಂದಿಸುವ ವಿವೇಕಿಗಳಂಥ
ಪ್ರಜ್ಞಾಯುತ ಸಂಬುದ್ಧರನ್ನು
ದೇವತೆಗಳು ಪ್ರೀತಿಸುತ್ತಾರೆ.     

	ಪ್ರಇÁ್ಞ(ಪ್ರಜ್ಞಾ) - ವಿವೇಕ ಎಂದರೆ ವಸ್ತುಗಳು ಹೇಗೆ ತೋರುತ್ತವೆಯೊ ಹಾಗಲ್ಲದೆ, ಅವು ವಾಸ್ತವವಾಗಿ ಹೇಗಿವೆಯೊ ಹಾಗೆ  ನೋಡುವಿಕೆ.  ನಿತ್ಯದ ಒಳಕ್ಕೆ ತೋರುವ ಒಳನೋಟ ಇದು.  ವಾಸ್ತವತೆಯ ಬೋಧಪ್ರದ ಗ್ರಹಿಕೆ ಇದು.  ಬುದ್ಧನ ಜ್ಞಾನೋದಯದಿಂದ ಹರಿದು ಬಂದ ಬೌದ್ಧಧರ್ಮ ಪ್ರಇÁ್ಞವನ್ನು ಆಧ್ಯಾತ್ಮಿಕತೆಯ ಸತ್ತ್ವ ಎಂದು ಪರಿಗಣಿಸುತ್ತದೆ.  ಆದ ಕಾರಣದಿಂದಲೇ ಇದು ಅಧ್ಯಾತ್ಮ ವಿಧಾನದ (ಧಮ್ಮದ) ಅನ್ವಯವನ್ನು ಎಲ್ಲಕ್ಕೂ ಮಿಗಿಲಾಗಿ ಗೊತ್ತುಪಡಿಸುತ್ತದೆ.  ನಿಜವಾಗಿ ನೋಡಿದರೆ ಇಡೀ ಪಥದುದ್ದಕ್ಕೂ ಇದು ತಾನೇ ತಾನಾಗಿದೆ.  ಶೀಲ ಮತ್ತು ಸಮಾಧಿಗಳೆರಡಕ್ಕೂ ತಿರುಳು ಮತ್ತು ತತ್ತ್ವಾಧಾರಗಳನ್ನು ಕೊಡುವುದಲ್ಲದೆ, ಅವನ್ನು ಉದ್ದೀಪಗೊಳಿಸುತ್ತ, ಒಂದಾಗಿ ಬೆಸೆಯುತ್ತ ಇರುತ್ತದೆ-ಮುತ್ತಿನ ಹಾರದಲ್ಲಿ ಮುತ್ತುಗಳನ್ನು ಕೋದಿರುವ ಬಂಗಾರದ ದಾರದಂತೆ.  ಆದ್ದರಿಂದ, ಜ್ಞಾನಿಯೂ ವಿವೇಕಿಯೂ ಆದವನು ಲೋಕದ ದ್ವಂದ್ವಗಳಿಗೆ ಅಭೇದ್ಯನಾಗಿ ಯಾವಾಗಲೂ ತನ್ನ ಸಮತೋಲವನ್ನು ಉಳಿಸಿಕೊಂಡಿರುತ್ತಾನೆ.  ಈ ಕೆಳಗೆ ವಿವರಿಸಿರುವಂತೆ:   
ಸಬ್ಬೇ ಸಂಖಾರಾ ಅನಿಚ್ಚಾತಿ
ಯದಾ ಪಇÁ್ಞಯ ಪಸ್ಸತಿ
ಅಥ ನಿಬ್ಬಿಂದತಿ ದುಕ್ಖೇ
ಏಸ ಮಗ್ಗೊ ವಿಸುದ್ಧಿಯಾ
		   	  					 ಸಂಸಾರಗಳೆಲ್ಲ ಅನಿತ್ಯ ಎನ್ನುವುದನ್ನು
				       			 ಪ್ರಜ್ಞೆಯಿಂದ ತಿಳಿದರೆ ಮಾನವ 
								 ದುಃಖದಿಂದ ಮುಕ್ತನಾಗುತ್ತಾನೆ. 
								 ಇದೇ ವಿಶುದ್ಧಿಗೆ ಮಾರ್ಗ.    
ಸತ್ಥಿ ಝಾನಂ ಅಪಇÁ್ಞ ಸ್ಸ
ಪಇÁ್ಞ ನತ್ಥಿ ಅಝಾಯತೋ
ಯಮ್ಹಿ ಝಾನಂ ಚ ಪಇÁ್ಞ ಚ
ಸವೇ ನಿಬ್ಬಾಣಸಂತಿಕೇ    
ಅಜ್ಞಾನಿಗೆ ಅವಿವೇಕಿಗೆ ಧ್ಯಾನವೂ ಇಲ್ಲ. 
ಧ್ಯಾನಹೀನನಿಗೆ ಜ್ಞಾನವೂ ಲಭಿಸದು. 
ಧ್ಯಾನವನ್ನು ಆಚರಿಸುವವನೂ ಜ್ಞಾನಸಹಿತನೂ
ಮಾತ್ರ ಖಂಡಿತವಾಗಿ ನಿರ್ಯಾಣಕ್ಕೆ  ನಿಕಟವಾಗಿರುತ್ತಾನೆ.      
ಸಖ್ಖತ್ಥಾ ವೇ ಸಪ್ಸುರಿಸಾ ಚಜ್ಜಂತಿ 
ನ ಕಾಮಾಕಾಮಾ ಲಪಯಂತಿ ಸಂತೋ
ಸುಖೇನ ಫುಟ್ಠಾ ಅಥವಾ ದುಖೇನ
ನ ಉಚ್ಚಾ ವಾಚಂ ಪಂಡಿತ ದಸ್ಸಯಂತಿ      
ಸಜ್ಜನರು ಎಲ್ಲ ಮೋಹಗಳನ್ನೂ ತ್ಯಜಿಸುತ್ತಾರೆ. 
ಸಂತರು ಕಾಮಗಳ ಬಯಕೆಯಲ್ಲಿ ತೊಡಗರು. 
ಜ್ಞಾನಿಗಳು ಸುಖ ಬಂದಾಗ ಹಿಗ್ಗುವುದಿಲ್ಲ,
ದುಃಖ ಆವರಿಸಿದಾಗ ಕುಗ್ಗುವುದಿಲ್ಲ.         
ಸಂತ ತಸ್ಸ ಮನಂ ಹೋತಿ
ಸಂತಾ ವಾಚಾ ಚ ಕಮ್ಮ ಚ
ಸಮ್ಮಾದಇÁ್ಞ ವಿಮುತ್ತಸ್ಸ
ಉಪಸಂತಸ್ಸ ತಾದಿನೋ            
ಸಮ್ಯಕ್ ಜ್ಞಾನ ಪಡೆದು ಮುಕ್ತನಾದವನ 
ಮನಸ್ಸು ಶಾಂತವಾಗಿರುತ್ತದೆ. 
ಮಾತು ಶಾಂತವಾಗಿರುತ್ತದೆ. ಕರ್ಮ  ಶಾಂತವಾಗಿರುತ್ತದೆ.        
ಪರಿಪೂರ್ಣ ಆಕ್ಷುಬ್ಧತೆಯಲ್ಲಿ, ಸಮತೋಲದಲ್ಲಿ ಅವನಿರುತ್ತಾನೆ.      
ಉತ್ತಮೋತ್ತಮ ಬದುಕನ್ನು ನಡೆಸಬಯಸುವವನಿಗೆ ಧಮ್ಮಪದದ ಸಂದೇಶವಿದು:
ಉತ್ತಿಟ್ಠೇ ನಪ್ಪಮಜ್ಜೆಯ್ಯ
ಧಮ್ಮಂ ಸುಚಂತಂ ಚರೇ
ಧಮ್ಮಚಾರೀ ಸುಖಂ ಸೇತಿ
ಅಸ್ಮಿಂ ಲೋಕೇ ಪರಮ್ದಿಚ
ಏಳು ! ಎಚ್ಚರಗೇಡಿಯಾಗಬೇಡ. 
ಋಜುಮಾರ್ಗದ ಬದುಕನ್ನು ನಡೆಸು. 
ಋಜುತ್ವ ಉಳ್ಳ ಮಂದಿ ಈ ಲೋಕದಲ್ಲಿ
ಮತ್ತೆ ಪರಲೋಕದಲ್ಲಿ ಸುಖದಿಂದ ಬಾಳುವರು.     
(ಬಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ